ಬ್ಯಾಕ್ಟ್ರೀಯ
	ಏಷ್ಯಾದ ನೈಋತ್ಯದಲ್ಲಿದ್ದ ಒಂದು ಪ್ರಾಚೀನ ರಾಜ್ಯ. ಹಿಂದೂಕುಷ್ ಮತ್ತು ಆಕ್ಸಸ್ (ಆಮೂದರ್ಯ) ನದಿ ನಡುವಣ ಈ ಪ್ರದೇಶ ಸುಮಾರು 402 ಕಿಮೀ ಉದ್ದ ಮತ್ತು 193 ಕಿಮೀ ಅಗಲ ಪ್ರದೇಶವನ್ನೊಳಗೊಂಡಿತ್ತು. ಬ್ಯಾಕ್ಟ್ರ್ ಇದರ ರಾಜಧಾನಿಯಾಗಿತ್ತು. ಹೆಚ್ಚು ಮರುಭೂಮಿಯಿಂದ ಕೂಡಿದ್ದು ಪಶುಪಾಲನೆಯೇ ಮುಖ್ಯ ಕಸಬಾಗುಳ್ಳ ಅಲೆಮಾರಿ ಬ್ಯಾಕ್ಟ್ರಿಯನ್ನರು ಇಲ್ಲಿ ಮೊದಲು ವಾಸಿಸುತ್ತಿದ್ದ ಮಂದಿ. ಸೈರಸ್ ದೊರೆಯ (ಕ್ರಿ.ಪೂ. 550-529) ಕಾಲದಲ್ಲಿ ಈ ಪ್ರದೇಶ ಪರ್ಷಿಯ ಸಾಮ್ರಾಜ್ಯದ ಒಂದು ಭಾಗವಾಯಿತು. ಮುಂದೆ ಅಲೆಗ್ಸಾಂಡರನ ಚಕ್ರಾಧಿಪತ್ಯಕ್ಕೆ ಸೇರಿದ್ದ ಈ ರಾಜ್ಯ ಸೆಲ್ಯೂಸಿಡ್ ದೊರಗಳ ಕಾಲದಲ್ಲಿ ಸ್ವಾತಂತ್ರ್ಯ ಪಡೆಯಲೆತ್ನಿಸಿ, ಕ್ರಿ.ಪೂ. ಎರಡನೆಯ ಶತಮಾನದ ಪ್ರಾರಂಭದಲ್ಲಿ (ಕ್ರಿ.ಪೂ. ಸು. 206) ಸ್ವತಂತ್ರವಾಯಿತು. ಆಗ ಬ್ಯಾಕ್ಟ್ರಿಯದ ದೊರೆಯಾಗಿದ್ದವನು ಯೂತಿಡೀಮಸ್. ಅವನ ಮಗ ಡೆಮಿಟ್ರಿಯಸ್ ಮೊದಲ ಬಾರಿ ಭಾರತಕ್ಕೆ ಬಂದು ಮೌರ್ಯ ಸಾಮ್ರಾಜ್ಯ ಆಳಿದಮೇಲೆ ಸ್ವತಂತ್ರವಾಗಿದ್ದ ಕೆಲವು ವಾಯವ್ಯ ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಂಡ. ಗಾರ್ಗೀ ಸಂಹಿತೆಯ ಯುಗಪುರಾಣದಲ್ಲಿ ಅವನು ಸಾಕೇತ, ಪಾಂಚಾಲಿ (ರೋಹಿಲ್ ಖಂಡ), ಮಥುರ, ಪುಷ್ಪಪುರಗಳನ್ನು (ಪಾಟಲೀಪುತ್ರ) ಗೆದ್ದನೆಂದು ತಿಳಿಸಿದೆ. ಪತಂಜಲಿಯ ಮಹಾಭಾಷ್ಯದಲ್ಲೂ ಇದರ ಉಲ್ಲೇಖವಿದೆ. ಮಹಾಭಾರತದಲ್ಲಿ ಬಂದಿರುವ ದತ್ತಮಿತ್ರನೆಂಬ ದೊರೆ ಈತನೇ ಇರಬೇಕೆಂದು ಕೆಲವರ ಅಭಿಪ್ರಾಯ.

	ಡೆಮಿಟ್ರಿಯಸ್ ಬಹುಕಾಲ ಭಾರತದಲ್ಲಿ ಉಳಿದ ಪರಿಣಾಮವಾಗಿ ಬ್ಯಾಕ್ಟ್ರೀಯವನ್ನು ಯೂಕ್ರಟೈಡಿಸ್ ಎಂಬ ಸಾಮಂತ ಸ್ವಾಧೀನಪಡಿಸಿಕೊಂಡು ಭಾರತದ ವಾಯವ್ಯಗಡಿಯವರೆಗೂ ತನ್ನ ಆಧಿಪತ್ಯ ವಿಸ್ತರಿಸಿದ. ಸಿಂಧ್ ಪ್ರಾಂತ್ಯಕ್ಕೂ ಇವನ ಅಧಿಕಾರ ವ್ಯಾಪಿಸಿತ್ತೆಂದು ತೋರುತ್ತದೆ. ಮುಂದೆ ಡೆಮಿಟ್ರಿಯಸ್‍ನ ವಂಗಜನೆಂದು ಹೇಳುವ ಮಿನಾಂಡರ್ ಎಂಬ ದೊರೆ ಶಾಕಲವನ್ನು (ಇಂದಿನ ಸಯಾಲ್ಕೋಟ್) ರಾಜಧಾನಿಯಾಗಿ ಮಾಡಿಕೊಂಡು ಯಶಸ್ವಿಯಾಗಿ ಆಳಿದನೆಂದು ತಿಳಿದುಬಂದಿದೆ. ಆಂಟಿಯಾಲ್ಕಿಡಾಸ್ ದೊರೆ ತಕ್ಷಶಿಲೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದನೆಂಬುದಕ್ಕೆ ಆಧಾರಗಳಿವೆ. ಇವನು ವಿದೀಶ ರಾಜ್ಯದ ದೊರೆ ಭಾಗಭದ್ರನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ್ದ. ಕಾಲಕ್ರಮೇಣ ಭಾರತದಲ್ಲಿ ನೆಲಸಿದ್ದ ಈ ಗ್ರೀಕರು ಭಾರತೀಯ ಸಂಸ್ಕøತಿ ಧರ್ಮಗಳ ಪ್ರಭಾವಕ್ಕೊಳಗಾಗಿ ಬೌದ್ಧ ಅಥವಾ ವೈಷ್ಣವ ಮತವಲಂಬಿಗಳಾಗಿ ಭಾರತೀಯರಾದರು. ಕ್ರಿಸ್ತಶಕ ಮೊದಲನೆಯ ಶತಮಾನದ ಕಾಲಕ್ಕೆ ಭಾರತದಲ್ಲಿ ಗ್ರೀಕರ ಸುಳಿವೂ ಇಲ್ಲದಂತಾಯಿತು. ಆದರೂ ಈ ಗ್ರೀಕರ ಸಂಪರ್ಕದಿಂದ ಮುಂದೆ ಭಾರತದ ವಾಯವ್ಯ ಪ್ರಾಂತ್ಯದಲ್ಲಿ ಗಾಂಧಾರ ಕಲೆ ಅರಳಿತೆನ್ನಬಹುದು.
(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ